ಗಂಡಭೇರುಂಡ

ಎರಡು ತಲೆಗಳುಳ್ಳ ಒಂದು ಪೌರಾಣಿಕ ಪಕ್ಷಿ. ಪಾಶ್ಚಾತ್ಯ ಪೌರಸ್ತ್ಯ ದೇಶಗಳಲ್ಲಿ ಗಂಡಭೇರುಂಡದ ಚರಿತ್ರೆಗೆ ಸಂಬಂಧಪಟ್ಟ ಕೆಲವು ಆಧಾರಗಳು ಸಿಕ್ಕಿವೆ. ಈಜಿಪ್ಟ್, ಸುಮೇರಿಯ ಮತ್ತು ಆರ್ಯನ್ ಸಂಸ್ಕøತಿಗಳಿಗೆ ಸಂಬಂಧಿಸಿದ, ರೆಕ್ಕೆಯಿಂದ ಕೂಡಿದ ಸೂರ್ಯಚಕ್ರವೂ ಜೀವವೃಕ್ಷವೂ ಸಂಯೋಜನೆಗೊಂಡು ಗಂಡಭೇರುಂಡ ರೂಪುಗೊಂಡಿತೆಂಬುದು ವಿವಾದಸ್ಪದವಾದ ಅಭಿಪ್ರಾಯ. ಆ ಬಗ್ಗೆ ಹೆಚ್ಚಿನ ಆಧಾರಗಳೇನೂ ಇಲ್ಲ. ಈಜಿಪ್ಟ್, ಅಸ್ಸೀರಿಯ ಮೊದಲಾದ ದೇಶಗಳಲ್ಲಿ ಇದು ಫಲವತ್ತಿನ ಆರಾಧನೆಗೆ (ಫರ್ಟಿಲಿಟಿ ಕಲ್ಟ್) ಸಂಬಂಧಪಟ್ಟ ಚಿಹ್ನೆ ಎಂದು ಊಹಿಸಲಾಗಿದೆ. 

	ಗಂಡಭೇರುಂಡ ಕ್ರಿ.ಪೂ. 1000ಕ್ಕಿಂತಲೂ ಮುಂಚಿನ ಹಿಟೈಟ್ ಶಿಲ್ಪದಲ್ಲಿ ಸಿಗುತ್ತದೆ. ಸಿಥಿಯನದಿಂದ ಇದು ರಷ್ಯ, ಜರ್ಮನಿ ಮೊದಲಾದ ದೇಶಗಳಿಗೆ ಹರಡಿತೆಂದು ಕಲರವ ನಂಬಿಕೆ. ಇದು ಭಾರತ ಉಪಖಂಡದ ತಕ್ಷಶಿಲೆಯಲ್ಲಿ ಮೊಟ್ಟಮೊದಲು ನಮಗೆ ದೊರೆಯುತ್ತದೆ.

	ವಿಷ್ಣು ನರಸಿಂಹಾವತಾರವನ್ನು ಎತ್ತಿ ಹಿರಣ್ಯಕಶಿಪುವನ್ನು ಸಂಹಾರ ಮಾಡಿದ ಮೇಲೂ ಅವನ ಕೋಪ ಶಮನವಾಗದೆ ಇದ್ದು. ಅವನಿಂದ ಇಡೀ ವಿಶ್ವವೇ ನಾಶವಾದೀತೆಂಬ ಅಂಜಿಕೆ ಮೂಡಿದಾಗ ದೇವತೆಗಳ ಪ್ರಾರ್ಥನೆಯಂತೆ ಶಿವ ಶರಭಾವತಾರ ಎತ್ತಿ ನರಸಿಂಹನನ್ನು ಎದುರಿಸಿದ. ಆಗ ವಿಷ್ಣು ಶರಭವನ್ನು ಅಡಗಿಸಲು ಗಂಡ ಭೇರುಂಡನಾದನೆಂದು ಪ್ರತೀತಿ. ಇದು ಶರಭಕ್ಕಿಂತ ಹೆಚ್ಚು ಶಕ್ತಿಯುತವಾದ್ದೆಂದೂ ಶರಭವೇ ಇದಕ್ಕೆ ಆಹಾರವೆಂದೂ ಹೇಳಲಾಗಿದೆ. ಗಂಡಭೇರುಂಡ ಶಕ್ತಿ ಪರಾಕಾಷ್ಠೆಯ ಚಿಹ್ನೆಯೆನಿಸಿದೆ. ವಿಷ್ಣುವಾಹನನಾದ ಗರುಡ, ಋಗ್ವೇದದಲ್ಲಿ ಬರುವ ಎರಡು ಹಕ್ಕಿಗಳು-ಇವುಗಳಿಂದ ಎರಡು ತಲೆಗಳುಳ್ಳ ಗಂಡಭೇರುಂಡ ಪಕ್ಷಿ ವಿಕಾಸ ಗೊಂಡಿರಬಹುದೆಂದೂ ಊಹಿಸಲಾಗಿದೆ.ಶಕ್ತಿಯ ಸಂಕೇತವಾಗಿ, ಇಲ್ಲವೇ ಶಾಂತಿಯ ಸಂಕೇತವಾಗಿ ಭಾರತದ ರಾಜರು ಹಿಂದಿನಿಂದಲೂ ಗಂಡಭೇರುಂಡವನ್ನು ತಮ್ಮ ಧ್ವಜಗಳಲ್ಲಿ ಸೇರಿಸಿಕೊಂಡು ಬಂದಿದ್ದಾರೆ.

	ಚಾಳುಕ್ಯರ ಕಾಲಕ್ಕೆ ಸೇರಿದ ಗಂಡಭೇರುಂಡ ಸ್ತಂಭವೊಂದು ಶಿವಮೊಗ್ಗ ಜಿಲ್ಲೆಯ ಷಿಕಾರಿಪುರ ತಾಲ್ಲೂಕಿನ ಬೆಳಗಾವಿಯಲ್ಲಿ (ಬಳ್ಳಿಗಾಮೆ) ಸಿಕ್ಕಿದೆ. ಈ ಸ್ತಂಭದ ತುದಿಯಲ್ಲಿ ಮನುಷ್ಯಾಕಾರದ ದೇಹದಿಂದಲೂ ಎರಡು ತಲೆಗಳಿಂದಲೂ ಕೂಡಿದ ಗಂಡಭೇರುಂಡ ಆಕೃತಿ ನಿಂತಿದೆ. ಇದು ರಾಕ್ಷಸರನ್ನು ನುಂಗುತ್ತಿರುವಂತೆ ಚಿತ್ರಿಸಲಾಗಿದೆ. ಮಹಾಮಂಡಲೇಶ್ವರ ಚಾಮುಂಡರಾಯರಸ ಶಕ 969ರಲ್ಲಿ (ಕ್ರಿ.ಶ. 1047) ಇದನ್ನು ಸ್ಥಾಪಿಸಿ ಗಂಡಭೇರುಂಡೇಶ್ವರ ದೇವರಿಗೆ ದತ್ತಿಯನ್ನು ಹಾಕಿಸಿಕೊಟ್ಟನೆಂಬುದಾಗಿ ಈ ಸ್ತಂಭದ ಅಡಿಯಲ್ಲಿರುವ ಶಾಸನದಿಂದ ತಿಳಿದುಬರುತ್ತದೆ. 12, 13ನೆಯ ಶತಮಾನಗಳಲ್ಲಿ ಗುಂಟೂರು ಜಿಲ್ಲೆಯ ಧಾನ್ಯಕಟಕದಿಂದ ಆಳುತ್ತಿದ್ದ ತೆಲಗು ಕೋಟರಿಗೂ ಗಂಡಭೇರುಂಡ ಗೊತ್ತಿತ್ತು.	

	ಹೊಯ್ಸಳ ಶಿಲ್ಪದಲ್ಲಿಯ ನಾಶದ ಸರಪಣಿ ತುಂಬ ಕುತೂಹಲಕಾರಿಯಾಗಿದೆ. ಬೇಲೂರಿನ ಕೇಶವ ದೇವಾಲಯ (1117) ಮತ್ತು ಕೊರವಂಗಲದ ಬೂಜೇಶ್ವರ ದೇವಾಲಯಗಳಲ್ಲಿ (1173) ಇದನ್ನು ನೋಡಬಹುದು. ಜಿಂಕೆಯನ್ನು ನುಂಗುತ್ತಿರುವ ಹೆಬ್ಬಾವನ್ನು ಆನೆಯೊಂದು ತನ್ನ, ಸೊಂಡಿಲಿನಲ್ಲಿ ಸಿಕ್ಕಿಸಿಕೊಂಡಿದೆ. ಆನೆಯನ್ನು ಸಿಂಹವೂ ಸಿಂಹವನ್ನು ಶರಭವೂ ಗಂಡಭೇರುಂಡವೂ ಕೊಲ್ಲೂತ್ತಿವೆ. 

	ವಿಜಯನಗರದ ಸಮ್ರಾಟನಾಗಿದ್ದ ಅಚ್ಯುತರಾಯನ (1530-42) ಚಿನ್ನದ ಮತ್ತು ತಾಮ್ರದ ನಾಣ್ಯಗಳ ಮೇಲೆ ಗಂಡಭೇರುಂಡದ ಮುದ್ರೆಯಿದೆ. ನಾಣ್ಯಗಳ ಮುಮ್ಮುಖದಲ್ಲಿ ಗಂಡಭೇರುಂಡ ತನ್ನ ಬೆನ್ನು ಕಾಣುವಂತೆ ಮೇಲಕ್ಕೆ ಹಾರುತ್ತಿರುವುದನ್ನು ತೋರಿಸಿದೆ. ಸೊಂಡಿಲು ಬಾಲಗಳನ್ನೆತ್ತಿಕೊಂಡಿರುವ ಭಯಗ್ರಸ್ತವಾದ ಆನೆಗಳನ್ನು ಆ ಪಕ್ಷಿ ತನ್ನೆರಡು ಕೊಕ್ಕುಗಳಲ್ಲೂ ಕಾಲುಗಳಲ್ಲೂ ಸಿಕ್ಕಿಸಿಕೊಂಡಿದೆ.

	ವಿಜಯನಗರದ ಚಕ್ರಾಧಿಪತ್ಯದ ಪತನವಾದ ಅನಂತರ ಅನೇಕ ಪಾಳೆಯಗಾರರು ಸ್ವತಂತ್ರರಾಗಿ ಆಳಿದರಷ್ಟೆ. ಮಧುರೆಯ ನಾಯಕರೂ ಕೆಳದಿಯ ನಾಯಕರೂ ಗಂಡಭೇರುಂಡವನ್ನು ಮುಂದುವರಿಸಿಕೊಂಡು ಬಂದರು. 16 ನೆಯ ಶತಮಾನಕ್ಕೆ ಸೇರಿದ ಕೆಳದಿಯ ವೀರಭದ್ರ ದೇವಾಲಯದ ಭುವನೇಶ್ವರಿಯಲ್ಲಿರುವ ಗಂಡಭೇರುಂಡ ಶಿಲ್ಪ ವಿಜಯನಗರದ ಗಂಡಭೇರುಂಡದಂತೆಯೇ ತನ್ನ ಕಾಲುಗಳಲ್ಲಿ ಆನೆಗಳನ್ನು ಸಿಕ್ಕಿಸಿಕೊಂಡಿದೆ. ಬಲಗಡೆ ಕಾಲಿಗೆ ಸಿಕ್ಕಿಸಿಕೊಂಡಿರುವ ಆನೆಯ ಸೊಂಡಿಲಿನಿಂದ ಮನುಷ್ಯನೊಬ್ಬ ತೂಗಾಡುತ್ತಿದ್ದಾನೆ. ಗಂಡಭೇರುಂಡ ತನ್ನ ಎರಡು ಕೊಕ್ಕುಗಳಲ್ಲಿಯೂ ಹರಿತವಾದ ಉಗುರುಗಳಿರುವ ತಮ್ಮ ಕಾಲುಗಳಿಂದ ಆನೆಗಳನ್ನು ಎತ್ತಿ ಕೊಂಡಿರುವ ಸಿಂಹಗಳನ್ನು ಕಚ್ಚಿಕೊಂಡಿದೆ. ಈ ಗಂಡಭೇರುಂಡಶಿಲ್ಪ ಒಂದು ಶ್ರೇಷ್ಠಕಲಾಕೃತಿ.

	ಗಂಡಭೇರುಂಡ ಪ್ರಾಚೀನ ಕಾಲದಿಂದಲೂ ಶಾಂತಿ ಪ್ರಗತಿ, ಸಮೃದ್ಧಿಗಳ ಚಿಹ್ನೆಯಾಗಿದೆ. ವಿಜಯನಗರದ ಅರಸರೂ ಕೆಳದಿಯ ನಾಯಕರೂ ಗಂಡಭೇರುಂಡ ಚಿಹ್ನೆಯನ್ನು ಬಳಸಿಕೊಂಡದ್ದು ತಮ್ಮ ಸಾರ್ವಭೌಮತ್ವವನ್ನು ಸೂಚಿಸಲಿಕ್ಕಾಗಿ. ಮೈಸೂರು ರಾಜರು ವಿಜಯನಗರದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಾಗ ತಮ್ಮ ಧ್ವಜದ ಮೇಲೆ ಗಂಡಭೇರುಂಡವನ್ನು ಪ್ರತಿಷ್ಠಾಪಿಸಿಕೊಂಡರು. ಮೈಸೂರರಸರ ಲಾಂಛನದಲ್ಲಿ ಮಧ್ಯದಲ್ಲಿ ಗಂಡಭೇರುಂಡವೂ ಮೂರು ಪಂಜಾಗಳನ್ನೂರಿ ಮುಂದಿನ ಬಲಪಂಜಾವನ್ನತ್ತಿ ಬಲಕ್ಕೆ ನೋಡುತ್ತ ನಡೆಯುವಂತಿರುವ ಸಿಂಹವೂ ಯಾಳಿಗಳಿಗೂ ಇವೆ. ಈಗಿನ ಮೈಸೂರು ಸರ್ಕಾರದ ಲಾಂಛನದಲ್ಲಿಯೂ ಗಂಡಭೇರುಂಡದ ಚಿಹ್ನೆಯಿದೆ. 					      (ಎಸ್.ಎಂ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ